ನೀವು ಒಂದು ಕಾರು ಖರೀದಿ ಮಾಡುವಾಗ ನೀವು ಹೇಗೆ ಮಾಡೆಲ್ಗಳನ್ನು ಶಾರ್ಟ್ಲಿಸ್ಟ್ ಮಾಡುತ್ತೀರಿ? ಮೊದಲು ನೀವು ಇತ್ತೀಚಿನ ಮಾಡೆಲ್ಗಳನ್ನು ಆಯ್ಕೆ ಮಾಡುತ್ತೀರೋ ಅಥವಾ ಕಾರ್ ವಿಧವನ್ನು ನಿರ್ಧರಿಸುತ್ತೀರೋ? ನಿಮಗೆ ಇನ್ನೂ ಖಚಿತವಿಲ್ಲದಿದ್ದರೆ, ನಿಮ್ಮ ಸಮೀಪದ ಡೀಲರ್ಭೇಟಿ ಮಾಡಿ. ಆಗ ನಿಮಗೆ ಅವರು ಮೊದಲು ಕೇಳುವ ಪ್ರಶ್ನೆಯೆಂದರೆ, ನೀವು ಎಸ್ಯುವಿ, ಹ್ಯಾಚ್ಬ್ಯಾಕ್, ಸೆಡಾನ್ ಪೈಕಿ ಯಾವ ಕಾರನ್ನು ನೋಡುತ್ತಿದ್ದೀರಿ?
ಇದೇ ರೀತಿ ಮ್ಯೂಚುವಲ್ ಫಂಡ್ ಸ್ಕೀಮ್ಗಳ ಕಾರ್ಯಕ್ಷಮತೆ ಹೋಲಿಕೆಯೂ ನಡೆಯುತ್ತದೆ. ವಿಭಿನ್ನ ವಿಭಾಗಗಳ ಸ್ಕೀಮ್ಗಳ ಕಾರ್ಯಕ್ಷಮತೆಯನ್ನು ನೀವು ಹೋಲಿಕೆ ಮಾಡಲಾಗದು. ಒಂದೇ ರೀತಿಯ ಹೂಡಿಕೆ ಉದ್ದೇಶ, ಸ್ವತ್ತು ನಿಯೋಜನೆ ಮತ್ತು ಒಂದೇ ಬೆಂಚ್ಮಾರ್ಕ್ ಸೂಚ್ಯಂಕ ಹೊಂದಿರುವ ಒಂದೇ ವಿಭಾಗದ ಸ್ಕೀಮ್ಗಳನ್ನು ಹೋಲಿಕೆ ಮಾಡಬೇಕು. ಸೆಡಾನ್ ಜೊತೆಗೆ ನೀವು ಎಸ್ಯುವಿ ಹೋಲಿಕೆ ಮಾಡಲಾಗದು. ಯಾಕೆಂದರೆ, ಎರಡನ್ನೂ ವಿಭಿನ್ನ ಅಗತ್ಯಗಳಿಗೆ ಹೊಂದುವಂತೆ ವಿನ್ಯಾಸ ಮಾಡಲಾಗಿದೆ. ಇದೇ ರೀತಿ ವಿಭಿನ್ನ ಹೂಡಿಕೆ ಉದ್ದೇಶಗಳಿಗೆ ವಿನ್ಯಾಸ ಮಾಡಿದ ಸ್ಕೀಮ್ಗಳು ವಿಭಿನ್ನ ರಿಸ್ಕ್ ಮಟ್ಟವನ್ನು ಹೊಂದಿರುತ್ತವೆ. ಆದರೆ, ಒಂದೇ ಬೆಂಚ್ಮಾರ್ಕ್ನ ಎರಡು ಸ್ಕೀಮ್ಗಳನ್ನು ನೀವು ಹೋಲಿಕೆ ಮಾಡುವಾಗ, ಒಂದೇ ಇಂಜಿನ್ ಸಿಸ್ಟಮ್ ಹೊಂದಿರುವ ಎರಡು ಕಾರುಗಳ ಕಾರ್ಯಕ್ಷಮತೆಯನ್ನು ಹೋಲಿಕೆ ಮಾಡಿದ ಹಾಗೆ. ನೀವು ಎರಡು ಬ್ಲೂಚಿಪ್ ಫಂಡ್ಗಳು ಅಥವಾ ಎರಡು ಸ್ಮಾಲ್ ಕ್ಯಾಪ್ ಫಂಡ್ಗಳನ್ನು ಪ್ರತ್ಯೇಕವಾಗಿ ಹೋಲಿಕೆ ಮಾಡಬಹುದು. ಆದರೆ ಈಕ್ವಿಟಿ ಸ್ಕೀಮ್ಗಳೇ ಆಗಿದ್ದರೂ, ಒಂದು ಬ್ಲೂಚಿಪ್ ಫಂಡ್ ಮತ್ತು ಒಂದು ಸ್ಮಾಲ್ಕ್ಯಾಪ್ ಫಂಡ್ ಅನ್ನು ಪರಸ್ಪರ ಹೋಲಿಕೆ ಮಾಡಲು ಸಾಧ್ಯವಿಲ್ಲ. ಹಾಗೆಯೇ, ಅದೇ ವಿಭಾಗದಲ್ಲಿ, ನೀವು ಒಂದೇ ಕಾಲದಲ್ಲಿನ ಕಾರ್ಯಕ್ಷಮತೆಯನ್ನು ಹೋಲಿಕೆ ಮಾಡಬೇಕು. ಯಾಕೆಂದರೆ, ನಗರದಲ್ಲಿ ಹಾಗೂ ಹೈವೇಯಲ್ಲಿ ಕಾರಿನ ಮೈಲೇಜ್ ಅನ್ನು ಹೋಲಿಸಲು ಸಾಧ್ಯವಿಲ್ಲ.